ಶುಕ್ರವಾರ, ಜುಲೈ 18, 2014

ಆಲ್​ರೌಂಡರ್​ಗಳ ತಂಡ

ಭಾರತ ಕ್ರಿಕೆಟ್ ತಂಡದ ಬಹುದಿನಗಳ ಕನಸು ಕೊನೆಗೂ ನನಸಾಗಿದೆ. ಟೀಮ್ ಇಂಡಿಯಾಗೆ ಇದುವರೆಗೂ ಸ್ಥಿರ ಪ್ರದರ್ಶನ ನೀಡುವ ಬೆಸ್ಟ್​ ಆಲ್​ರೌಂಡರ್​ ಸಿಕ್ಕಿರಲಿಲ್ಲ. ಅದ್ರಲ್ಲೂ ಫಾಸ್ಟ್​ ಬೌಲಿಂಗ್​ ಆಲ್​​ರೌಂಡರ್​​​​​ನ ಕೊರತೆಯನ್ನ ಭಾರತೀಯರು ಎದುರಿಸುತ್ತಿದ್ದರು. ಆದ್ರೆ ಈಗ ಭಾರತಕ್ಕೆ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ ನಾಲ್ವರು ಆಲ್​ರೌಂಡರ್ಸ್​ ಸಿಕ್ಕಿದ್ದಾರೆ. ಎಲ್ಲರೂ ಒಬ್ಬರಿಗಿಂತ ಒಬ್ಬರು ಎನ್ನುವಂತೆ ಪ್ರದರ್ಶನ ನೀಡ್ತಿದ್ದಾರೆ. ಅವರವರಲ್ಲೇ ಹೆಲ್ತಿ ಕಾಂಪಿಟೇಶನ್ ಸಹ ಶುರುವಾಗಿ ಬಿಟ್ಟಿದೆ.

ಕಳೆದೆರಡು ದಶಕದಿಂದ ಭಾರತದ ಪರ ಅಗ್ರ ಆರು ಬ್ಯಾಟ್ಸ್​​ಮನ್​ಗಳು ಔಟಾದ್ರೆ ಮುಗೀತು. ಐದಾರು ರನ್​ಗಳ ಅಂತರದಲ್ಲಿ ಉಳಿದ ನಾಲ್ಕು ವಿಕೆಟ್​ಗಳು ಬಿದ್ದು ಹೋಗುತ್ತಿದ್ವು. ಆದ್ರೆ ಕಳೆದೊಂದು ವರ್ಷದಿಂದ ಹಾಗೆ ಆಗ್ತಾಯಿಲ್ಲ. ಕೆಳ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡುವ ಆಟಗಾರರು ನಮ್ಮಲ್ಲಿದ್ದಾರೆ. ಬಾಲಂಗೋಚಿಗಳು ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿದ್ದಾರೆ.

ಕಳೆದೆರಡು ದಶಕಗಳಿಂದ ಭಾರತ ಫಾಸ್ಟ್​ ಬೌಲಿಂಗ್ ಆಲ್​ರೌಂಡರ್ ಕೊರತೆ ಎದುರಿಸುತ್ತಿತ್ತು. ಆದ್ರೆ ಈಗ 11ನೇ ಬ್ಯಾಟ್ಸ್​​ಮನ್ ಆಗಿ ಕಣಕ್ಕಿಳಿದು ರನ್ ಗಳಿಸುವ ಆಲ್​ರೌಂಡರ್​ ಇರುವುದು ಭಾರತದ ಶಕ್ತಿ ಹೆಚ್ಚಿಸಿದೆ. ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್​ನಲ್ಲಿ ಗಮನ ಸೆಳೆದಿದ್ದು ಬಾಲಂಗೋಚಿ ಬ್ಯಾಟ್ಸ್​​​ಮನ್​ಗಳು. ಅಂದ್ರೆ ಆಲ್​ರೌಂಡರ್ಸ್​ ಆಟ.

ಭುವನೇಶ್ವರ್ ಕುಮಾರ್​ ಇಂಗ್ಲೆಂಡ್​ ವಿರುದ್ಧ ಫಸ್ಟ್ ಟೆಸ್ಟ್​​ನ ಎರಡು ಇನ್ನಿಂಗ್ಸ್​ನಲ್ಲೂ ಅರ್ಧಶತಕ ಬಾರಿಸೋ ಮೂಲಕ ಗಮನ ಸೆಳೆದ್ರು. ಒಬ್ಬ ಪರ್ಫೆಕ್ಟ್ ಫಾಸ್ಟ್​ ಬೌಲರ್​ ಕಮ್​ ಆಲ್​ರೌಂಡರ್​ ಹುಡುಕಾಟದಲ್ಲಿದ್ದ ಟೀಮ್​ ಇಂಡಿಯಾ ಆಸೆ ಕೊನೆಗೂ ಭುವಿ ಆಟದಿಂದ ನೆರವೇರಿತು. ಇಂಗ್ಲೆಂಡ್ ವಿರುದ್ಧ ಫಸ್ಟ್ ಇನ್ನಿಂಗ್ಸ್​ನಲ್ಲಿ ಕಡಿಮೆ ಮೊತ್ತಕ್ಕೆ ಕುಸಿಯುತ್ತಿದ್ದ ತಂಡಕ್ಕೆ ಆಸರೆಯಾದ ಭುವಿ, ಸೆಕೆಂಡ್ ಇನ್ನಿಂಗ್ಸ್ ಸೋಲಿನಿಂದ ಪಾರು ಮಾಡಿದ್ರು. ತಾನು ದೇಸಿ ಕ್ರಿಕೆಟ್​ನಲ್ಲಿ ಮಾತ್ರ ಆಲ್​ರೌಂಡರ್ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೆಸ್ಟ್ ಆಲ್​ರೌಂಡರ್​ ಅನ್ನೋದನ್ನ ಪ್ರೂವ್ ಮಾಡಿದ್ರು.

ದೇಸಿ ಕ್ರಿಕೆಟ್​​​ನಲ್ಲಿ ಆಲ್​ರೌಂಡರ್​ ಪ್ರದರ್ಶನ ನೀಡುತ್ತಿದ್ದ ಸ್ಟುವರ್ಟ್​ ಬಿನ್ನಿ, ಈಗ ಟೀಮ್ ಇಂಡಿಯಾ ಪರವಾಗಿಯೂ ಆಲ್ರೌಂಡ್​ ಆಟವಾಡುತ್ತಿದ್ದಾರೆ. ಈ ಮೂಲಕ ಭಾರತಕ್ಕೆ ಇದ್ದ ಫಾಸ್ಟ್ ಬೌಲಿಂಗ್ ಆಲ್​ರೌಂಡರ್ ಕೊರತೆಯನ್ನ ನೀಗಿಸುತ್ತಿದ್ದಾರೆ. ಮೊದಲೆರಡು ಏಕದಿನ ಪಂದ್ಯದಲ್ಲಿ ಅವರಿಗೆ ತಮ್ಮ ಸಾಮರ್ಥ್ಯ ತೋರಿಸುವ ಅವಕಾಶ ಸಿಕ್ಕಿರಲಿಲ್ಲ. ಆದ್ರೆ ಅವರಾಡಿದ ಮೂರನೇ ಮ್ಯಾಚ್​​ನಲ್ಲೇ ಬಾಂಗ್ಲಾದೇಶ ವಿರುದ್ಧ 6 ವಿಕೆಟ್​ ಪಡೆಯೋ ಮೂಲಕ ದಾಖಲೆ ನಿರ್ಮಿಸಿದ್ರು. ಇನ್ನು ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್​ನ ಸತ್ವವಿಲ್ಲದ ಪಿಚ್​ನಲ್ಲಿ ವಿಕೆಟ್​ ಪಡೆಯಲಿಲ್ಲ. ಆದ್ರೆ ಸೆಕೆಂಡ್ ಇನ್ನಿಂಗ್ಸ್​​ನಲ್ಲಿ ಆಕರ್ಷಕ 78 ರನ್ ಬಾರಿಸಿ ಟೆಸ್ಟ್​ ಡ್ರಾಗೊಳಿಸಿದ್ದು ಬಿನ್ನಿ ಬ್ಯಾಟಿಂಗ್. ಎರಡು ದಶಕಗಳ ಫಾಸ್ಟ್ ಬೌಲಿಂಗ್ ಕಮ್ ಆಲ್​ರೌಂಡರ್​ ಕೊರತೆಯನ್ನ ಭುವನೇಶ್ವರ್ ಮತ್ತು ಬಿನ್ನಿ ನೀಗಿಸಿದ್ದಾರೆ. ಇವರಿಬ್ಬರ ಆಲ್​ರೌಂಡ್ ಆಟ ಹೀಗೆ ಮುಂದುವರೆದ್ರೆ, ವಿದೇಶದಲ್ಲಿ ಭಾರತ ಸರಣಿ ಗೆಲ್ಲೋದ್ರಲ್ಲಿ ಅನುಮಾನವಿಲ್ಲ.

ರವೀಂದ್ರ ಜಡೇಜಾ ಸದ್ಯ ಟೀಮ್ ಇಂಡಿಯಾ ಪರ ಸ್ಥಿರವಾಗಿ ಆಲ್​ರೌಂಡ್​ ಪ್ರದರ್ಶನ ನೀಡುತ್ತಿರುವ ಏಕೈಕ ಆಟಗಾರ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಅವರ ಆಟ ಬೆಸ್ಟ್​. ಅದು ಟೆಸ್ಟ್​ ಆಗಿರ್ಲಿ, ಒನ್​ಡೇ ಆಗಿರ್ಲಿ, ಟಿ20 ಆಗಿರ್ಲಿ, ಎಲ್ಲಾ ಮಾದರಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿಯೇ ಮೂರು ಮಾದರಿ ಕ್ರಿಕೆಟ್​ನಲ್ಲಿ ಅವರಿಗೆ ಖಾಯಂ ಸ್ಥಾನ. ಅದೆಷ್ಟೋ ಪಂದ್ಯಗಳನ್ನ ಗೆಲ್ಲಿಸಿಕೊಟ್ಟ ರೂವಾರಿ.

ರವಿಚಂದ್ರನ್​ ಅಶ್ವಿನ್ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದು, ಒಬ್ಬ ತಜ್ಞ ಸ್ಪಿನ್ ಬೌಲರ್​ ಆಗಿ. ಆದ್ರೆ ಪಂದ್ಯದಿಂದ ಪಂದ್ಯಕ್ಕೆ ಅವರು ಪಕ್ವವಾಗುತ್ತಾ ಬಂದ್ರು. ಸ್ಪಿನ್ ಮ್ಯಾಜಿಕ್ ಜೊತೆ ಬ್ಯಾಟಿಂಗ್​​ನಲ್ಲೂ ತಮ್ಮ ಕೈಚಳಕ ತೋರಿಸಿದ್ರು. ಒನ್​ಡೇ-ಟಿ20ಯಲ್ಲಿ ರನ್ ಗಳಿಸಲು ಸ್ವಲ್ಪ ಪರದಾಡುತ್ತಿದ್ದಾರೆ. ಆದ್ರೆ ಟೆಸ್ಟ್​​ನಲ್ಲಿ ಮಾತ್ರ ಅಶ್ವಿನ್ ಆಲ್​ರೌಂಡ್​ ಆಟವನ್ನ ಪ್ರದರ್ಶಿಸುತ್ತಾ ಬಂದಿದ್ದಾರೆ. ಟೆಸ್ಟ್ ಕ್ರಿಕೆಟ್​​ನಲ್ಲಿ ಎರಡು ಶತಕ ಮತ್ತು ಮೂರು ಅರ್ಧ ಶತಕ ದಾಖಲಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಎರಡು ಸೆಂಚುರಿ ಸಿಡಿಸಿ ಭಾರತಕ್ಕೆ ಆಸರೆಯಾಗಿದ್ದರು. ಇದ್ರಲ್ಲೇ ಗೊತ್ತಾಗುತ್ತೆ ಅವರು ಬೆಸ್ಟ್​ ಆಲ್​ರೌಂಡರ್ ಅಂತ.

ಕಪಿಲ್​ ದೇವ್ ಹಾಗೂ ಮನೋಜ್​ ಪ್ರಭಾಕರ್​ ನಂತ್ರ ಬೆಸ್ಟ್ ಆಲ್​ರೌಂಡರ್​​​ಗಳು ಭಾರತಕ್ಕೆ ಸಿಕ್ಕಂತಾಗಿದೆ. ಈ ನಾಲ್ವರು ಆಲ್​ರೌಂಡರ್ಸ್, ಹೀಗೆ ಸ್ಥಿರ ಪ್ರದರ್ಶನ ನೀಡಿದಲ್ಲಿ ಟೀಮ್ ಇಂಡಿಯಾ ಟೆಸ್ಟ್​, ಒನ್​ಡೇ, ಟಿ20 ಕ್ರಿಕೆಟ್​ನಲ್ಲಿ ವಿಶ್ವದ ನಂಬರ್ ಒನ್ ತಂಡವಾಗಿ ಹೊರಹೊಮ್ಮುವುದರಲ್ಲಿ ಅನುಮಾನವಿಲ್ಲ.

ರವಿ.ಎಸ್​

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ